ನಾನು ಮತ್ತು ತಂದೆ

 ಪೂಜ್ಯ ಗುರುಹಿರಿಯರೆ ಹಾಗೂ ನನ್ನೆಲ್ಲ ನಲ್ಮೆಯ ಸ್ನೇಹಿತ ಮಿತ್ರರೇ ನಿಮ್ಮೆಲ್ಲರಿಗೂ ಈ ಶುಭ ಮುಂಜಾನೆಯ ಶರಣು ಶರಣಾರ್ಥಿಗಳು ಹಾಗೂ ಇಂದಿನ ದಿನದ ಈ ಒಂದು ಚಿಂತನೆ ನಮ್ಮೆಲ್ಲರಿಗಾಗಿ👍🏼🙏🏼😊


🙏🏼🙏🏼ಕುಟುಂಬಕ್ಕೆ ಕೊಡಬೇಕಾದ ಪ್ರೀತಿ🙏🏼🙏🏼


ಆ ಊರಿನಲ್ಲಿ ಒಂದು ಸರ್ಕಾರಿ ಶಾಲೆ ಇತ್ತು. ಅಲ್ಲಿದ್ದ ಒಬ್ಬ ಶಿಕ್ಷಕಿ ಬಹಳ ಶ್ರದ್ಧೆಯಿಂದ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದರು. ಪ್ರತಿಯೊಂದು ಮಕ್ಕಳ ಮನಸ್ಸು ಹಾಗೂ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದರು. ಅವರ ಸಮಸ್ಯೆಗಳಿದ್ದರೆ, ನಿಧಾನವಾಗಿ ಬಿಡಿಸಿ ಕೇಳಿ ಸಮಾಧಾನ ಪಡಿಸಿ ಅವುಗಳ ಮುಖದಲ್ಲಿ  ಮಂದಹಾಸ ಮೂಡಿಸುತ್ತಿದ್ದರು. ಪ್ರತಿ ತಿಂಗಳು ಆಯಾ ಮಕ್ಕಳ ಪೋಷಕರನ್ನು ಶಾಲೆಗೆ ಕರೆಸಿ ಸಭೆ ನಡೆಸಿ ಮಕ್ಕಳ ಓದು, ಆಟೋಟಗಳು, ಅಂಕಗಳು, ಹವ್ಯಾಸಗಳ ಕುರಿತು ಪೋಷಕರ ಜೊತೆ ಚರ್ಚೆ ನಡೆಸುತ್ತಿದ್ದರು. ಸಭೆ ನಿಗದಿಪಡಿಸಿದ ದಿನ ಸಾಧಾರಣವಾಗಿ ಎಲ್ಲಾ ಮಕ್ಕಳ ಪೋಷಕರು ಬರುತ್ತಿದ್ದರು. ಆದರೆ ಒಂದು ಮಗುವಿನ ತಂದೆ ಮಾತ್ರ ಎಂದೂ ಸಭೆಗೆ ಬಂದಿರಲಿಲ್ಲ. ಇದನ್ನು ಗಮನಿಸಿದ ಶಿಕ್ಷಕಿ,  ಸಭೆಗೆ, ಮಗುವಿನ ತಂದೆ ಬರಲೇಬೇಕೆಂದು ಕಡ್ಡಾಯ ಮಾಡಿದರು. ಆದರೆ ಆ ಮಗುವಿನ ತಂದೆ ಸಮಯವಿಲ್ಲವೆಂದು ಹೇಳಿದರು. ಪಟ್ಟು ಬಿಡದ ಶಿಕ್ಷಕಿ ನಿಮ್ಮ ಸಮಯಕ್ಕೆ ನಾನು ಸಭೆ ಸೇರಿಸುತ್ತೇನೆ ಎಂದರು. ಆಗ ಮಗುವಿನ ತಂದೆ ಒಲ್ಲದ ಮನಸ್ಸಿನಿಂದ ಒಪ್ಪಿ ಸಭೆಗೆ ಬಂದರು. 


ಸಭೆಗೆ ಬಂದಾಗಲೂ ಆತನು, ಶಿಕ್ಷಕಿಗೆ ನೀವು ಬರಲೇ ಬೇಕೆಂದು ಒತ್ತಾಯ ಮಾಡಿದ್ದರಿಂದ ಇಂದು ಬಂದಿದ್ದೇನೆ. ಬೇಗ ಹೇಳಿ ಏನು ವಿಷಯ ಎಂದು ಅವಸರ ಪಡಿಸಿದರು. ಆಗ ಶಿಕ್ಷಕಿಯು,  ಮಾತನಾಡದೆ ಮಕ್ಕಳು ಬರೆದಿದ್ದ ಚಿತ್ರಗಳನ್ನು ಹುಡುಕಿ ಆತನ ಮಗಳು ಬರೆದಿದ್ದ ಚಿತ್ರವನ್ನು ತೆಗೆದು ಅವರ ಕೈಗೆ ಕೊಟ್ಟರು. ಚಿತ್ರದ ಶೀರ್ಷಿಕೆ:- 'ನನ್ನ ಮನೆ ಮತ್ತು ಮನೆಯಲ್ಲಿರುವವರು'  ಆ ತಂದೆ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದರು. ಆತನ ಮಗಳು  ಅದರ ಕೈಯಿಂದಲೇ ಅಂಕುಡೊಂಕು ಗೆರೆಗಳಿಂದ  ಚಿತ್ರವನ್ನು ಬರೆದಿತ್ತು.ಚಿತ್ರದಲ್ಲಿ ಅದರ ತಾಯಿ, ಅಣ್ಣ, ಮತ್ತು ಅಜ್ಜಿ ,ತಾತ  ಹಾಗೂ ನಾಯಿ ಮರಿ ಎಲ್ಲಾ  ಚಿತ್ರವನ್ನು ಬರೆದಿತ್ತು. ಆ ತಂದೆ ಬಹಳ ಕಸಿವಿಸಿಯಿಂದ ಮತ್ತೊಮ್ಮೆ ಚಿತ್ರವನ್ನು ದಿಟ್ಟಿಸಿ ನೋಡಿದರು. ಕಚ ಪಚ ಗೀಚಿದ ಗೆರೆಗಳ ಮಧ್ಯದಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ, ಅದರಲ್ಲಿ ಅವರ ಚಿತ್ರ ಮಾತ್ರ ಕಾಣಲಿಲ್ಲ. ಆಗ ಶಿಕ್ಷಕಿಗೆ, 'ಇದರಲ್ಲಿ ನನ್ನ ಕುಟುಂಬದ ಎಲ್ಲರೂ ಇದ್ದಾರೆ. ಆದರೆ ನನ್ನ ಮುದ್ದಿನ ಮಗಳು ನನ್ನನ್ನೇ ಬಿಟ್ಟಿದ್ದಾಳೆ' ಏಕೆ ಎಂದು ಕೇಳಿದರು.ಆಗ ಶಿಕ್ಷಕಿ 'ನಾನು ಸಹ ಇದೇ ಪ್ರಶ್ನೆಯನ್ನು ನಿಮ್ಮ ಮಗಳಿಗೆ ಕೇಳಿದೆ'  ಆಕೆ ಟೀಚರ್ ನೀವು ಮನೆಯಲ್ಲಿ ಇರುವವರ ಬಗ್ಗೆ ಚಿತ್ರ ಬರೆಯಿರಿ ಎಂದು ಹೇಳಿದಿರಿ, ಆದರೆ ನಮ್ಮ ತಂದೆ ಯಾವಾಗಲೂ ಮನೆಯಲ್ಲಿ ಇರುವುದಿಲ್ಲ.ಆದ್ದರಿಂದ ನಾನು ಅವರ ಚಿತ್ರ ಬರೆಯಲಿಲ್ಲ ಎಂದು ಹೇಳಿದಳು. ಬಹುಶಃ ನೀವು ಮನೆಯಲ್ಲಿ ಹೆಚ್ಚು ಇರುವುದಿಲ್ಲ ಎಂದು ಕಾಣುತ್ತದೆ. ಆದ್ದರಿಂದ ನಿಮ್ಮ ಮಗಳ ಚಿತ್ರದಲ್ಲೂ ನೀವು ಬರಲಿಲ್ಲ  ಎಂದು ಶಿಕ್ಷಕಿ ಹೇಳಿದರು. 


ಶಿಕ್ಷಕಿಯಿಂದ ಈ ಮಾತು ಕೇಳಿ ಆ ಮಗುವಿನ ತಂದೆಗೆ ಹೊಟ್ಟೆಯ ಮೇಲೆ ಯಾರೋ  ಗಟ್ಟಿಯಾಗಿ ಗುದ್ದಿ ದಂತಾಯಿತು, ಅವರ ಕರುಳೇ ಕಿತ್ತು ಬಂದಂತಾಯಿತು, ಈ ಕ್ಷಣದವರೆಗೂ ಅವರ ಮನಸ್ಸಿನಲ್ಲಿದ್ದುದು ನನ್ನ ಕೆಲಸ ನನ್ನ ಸಂಪಾದನೆ ಹೆಚ್ಚು ಎಂದುಕೊಂಡಿದ್ದರು. ಆದರೆ ಅದು  ಹೀಗಾಗುತ್ತದೆಎಂದು ತಿಳಿದಿರಲಿಲ್ಲ. "ನಾನು ಮನೆಯಲ್ಲಿ ಹೆಚ್ಚು ಸಮಯ ಇರುತ್ತಿರಲಿಲ್ಲ ನಿಜ. ಆದರೆ ನಾನು ಈ ಮನೆಯವನೇ ಅಲ್ಲ ಎಂದು ನನ್ನ ಮಗಳು  ತಿಳಿದುಕೊಳ್ಳುವಷ್ಟು ನಾನು ಮನೆಯಿಂದ ಹೊರಗಿರುತ್ತೆನೆಂದು ಇಂದು ನನ್ನ ಮಗಳಿಂದ ನನಗೆ ಗೊತ್ತಾಯಿತು. ದಯವಿಟ್ಟು ನನ್ನನ್ನು ಕ್ಷಮಿಸಿ" ಎಂದು ತಲೆತಗ್ಗಿಸಿದರು. 


ಸ್ವಲ್ಪ ಹೊತ್ತಾದಮೇಲೆ ಇನ್ನು ಮುಂದೆ ನನ್ನ ವರ್ತನೆಯನ್ನು ಬದಲಾಯಿಸಿ ಕೊಳ್ಳುತ್ತೇನೆ. ನೀವು ಇಂದು ನನ್ನ ಕಣ್ಣು ತೆರೆಸಿದಿರಿ. ಇಷ್ಟು ಹಟತೊಟ್ಟು ನೀವು ನನ್ನನ್ನು ಶಾಲೆಗೆ ಕರೆಸದಿದ್ದರೆ,  ಈ ತಪ್ಪನ್ನು ಎಂದಿಗೂ ತಿದ್ದಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇನ್ನು ಮುಂದೆ ಹೆಚ್ಚು ಸಮಯವನ್ನು  ಕುಟುಂಬದತ್ತ ಕೊಡಲು ಪ್ರಯತ್ನಿಸುತ್ತೇನೆ ಎಂದು ಶಿಕ್ಷಕಿಗೆ ಆಶ್ವಾಸನೆ ಕೊಟ್ಟು ಹೊರಟು ಹೋದರು. ಮುಂದೆ ಅದರಂತೆಯೇ ನಡೆದು ಕೊಂಡರು. ಇದರ

ಪರಿಣಾಮವಾಗಿ ನಾಲಕ್ಕೇ ನಾಲ್ಕು ತಿಂಗಳ ನಂತರ ಅದೇ ಮಗು ಬರೆದ ಚಿತ್ರದಲ್ಲಿ ತಂದೆಯ ಚಿತ್ರವನ್ನು ಸಹ ಬರೆದಿತ್ತು. ಅಲ್ಲದೆ ಅಂದಿನ ಶೀರ್ಷಿಕೆಗೆ ಆ ಮಗು ಕೊಟ್ಟ ಹೆಸರು 'ನಾನು ಹೆಚ್ಚು ಪ್ರೀತಿಸುವ ವ್ಯಕ್ತಿ ನಮ್ಮ ತಂದೆ'  ಎಂದು ತಂದೆಯ ಚಿತ್ರದ ಕೆಳಗೆ ಬರೆದಿತ್ತು.


ನನ್ನ ಅನಿಸಿಕೆ:


ಸಾಮಾನ್ಯವಾಗಿ ಒಂದು ಮಟ್ಟಕ್ಕೆ ಬೆಳೆದ ನಂತರ ಪ್ರತಿಯೊಬ್ಬ ತಂದೆ, ಈಗ ಕೆಲವು ತಾಯಂದಿರು, ಸಂಪಾದನೆ, ವೃತ್ತಿ ಅದರಲ್ಲಿ  ಬರುವ ಕೀರ್ತಿ ಇದಕ್ಕೆ ಅಗತ್ಯಕ್ಕಿಂತ ಹೆಚ್ಚು ಮಹತ್ವವನ್ನು ಕೊಡುವುದಾಗಿದೆ. ನಮ್ಮ ಪಾರ್ಟಿ, ಮೀಟಿಂಗು, ಸ್ನೇಹಿತರ ಬಳಗ,  ಔತಣ ಕೂಟ, ಬಟ್ಟೆ, ಆಭರಣ, ಮನೆ, ಹೆಸರು, ಅಂತಸ್ತು, ಗೌರವ, ಇನ್ನೂ ಟಿವಿಯಲ್ಲಿ ಬರಬೇಕು ಎನ್ನುವ ಹಂಬಲ. ನನ್ನನ್ನು ಎಲ್ಲರೂ ಗುರುತಿಸಬೇಕು. ಹೀಗೆ ಇವೆಲ್ಲವೂ ನನ್ನದು ಅನ್ನುವುದರಲ್ಲೆ  ಗಿರಕಿ ಹೊಡೆಯುತ್ತಿರುತ್ತದೆ.  ನಮ್ಮ ಮಕ್ಕಳೇ ಫಸ್ಟ್ ಬರಬೇಕು, ಎಲ್ಲವುದರಲ್ಲೂ ನಮ್ಮ ಮಕ್ಕಳೇ ಮುಂದಿರಬೇಕು, ಅವುಗಳ ಯೋಚನೆಯಲ್ಲಿ ಮಕ್ಕಳುಗಳ ಮೇಲೆ ಒತ್ತಡ ಹೇರುವಿಕೆ ಹೆಚ್ಚಾಗುತ್ತಿದೆ. ಇವೆಲ್ಲಗಳ ಮಧ್ಯೆ ಕರೋನಾ ಬಂದಮೇಲಂತೂ ಆನ್ಲೈನ್ ಕ್ಲಾಸುಗಳು ಮಾಡುವುದರ ಮೂಲಕ, ಶಾಲೆ, ಶಿಕ್ಷಕರುಗಳ ಭಯವೂ ಇಲ್ಲದೆ, ಮಕ್ಕಳು ಓದಿನ ಕಡೆ, ಅಲ್ಲದೆ ಮುಖ್ಯವಾಗಿ ಬಾಲ್ಯದ ಹುಡುಗಾಟಿಕೆ, ಆಟೋಟಗಳ ಕಡೆಗೆ, ಗಮನ ಕೊಡುವುದು  ಕಷ್ಟವಾಗುತ್ತಿದೆ. 


ಪೋಷಕರು  ಇದನ್ನೆಲ್ಲಾ ನಾವು ಯಾರಿಗಾಗಿ ಮಾಡುತ್ತೇವೆ ಎಂಬುದನ್ನೇ ಮರೆತು ಬಿಡುತ್ತೇವೆ. ಹೆತ್ತವರು ಮತ್ತು ಮಕ್ಕಳಗಳ ನಡುವೆ ಅಂತರಗಳು ಜಾಸ್ತಿಯಾಗುತ್ತಾ ಹೋಗುತ್ತದೆ. ಆಗ ಮಕ್ಕಳು ಸಹ ತಮ್ಮ ಸಮಯವನ್ನು ಬೇರೆ ಕಡೆ ಹರಿಸುವ  ಸಾಧ್ಯತೆಯನ್ನು  ಅಲ್ಲಗಳೆಯುವಂತಿಲ್ಲ. 


ಅನಿಚ್ಛಂತೋಪಿ  ವಿನಯಂ ವಿದ್ಯಾಭ್ಯಾಸೇನ  ಬಾಲಕಾ!

ಭೇಷಜೇನೇವ  ನೈರುಜ್ಯಂ ಪ್ರಾಪಣೀಯಾಹ  ಪ್ರಯತ್ನತ! 


ಔಷಧವನ್ನು ಕೊಟ್ಟು ರೋಗವನ್ನು ಪರಿಹರಿಸುವಂತೆ,

ಬಾಲಕರು ಇಚ್ಛಿಸದಿದ್ದರೂ ಅವರಿಗೆ ಪ್ರಯತ್ನಪೂರ್ವಕ

ವಿದ್ಯಾಭ್ಯಾಸವನ್ನು ಮಾಡಿಸಿ ನಯ ನೀತಿಗಳನ್ನು ಕಲಿಸಿಕೊಡಬೇಕು. ಅಲ್ವಾ ಸ್ನೇಹಿತರೆ ನೀವೇನಂತೀರಿ ? 


ವಂದನೆಗಳೊಂದಿಗೆ,

ಬರಹ:- ಆಶಾ ನಾಗಭೂಷಣ.

ಸಂಗ್ರಹ ಶ್ರೀಮತಿ ಶಾರದಾ ನಾಗೇಶ್.

 ಶಿಕ್ಷಕರು ಹಾಗೂ ಗಾಯಕರು ಚನ್ನಪಟ್ಟಣ

Comments