ಪ್ರತಿಭಟಣೆಯ ಪುಟಗಳಿಂದ ಭಾಗ -1 :------ಕೇಶವ ಪ್ರಸಾದ್ ಖಜಾಂಜಿ KSGNPSEA

#ಪ್ರತಿಭಟನೆಯ_ಪುಟಗಳಿಂದ - ಈ ದಿನ ಅಂದರೆ 16/10/1968, ಇಬ್ಬರು ಆಫ್ರಿಕಾ ಸಂಜಾತ ಅಮೆರಿಕನ್ನರ, ಶ್ರೀ ಟಾಮಿ ಸ್ಮಿತ್ ಮತ್ತು ಶ್ರೀ ಜಾನ್ ಕಾರ್ಲೋಸ್ ಒಲಂಪಿಕ್ ನ ಚಿನ್ನ ಮತ್ತು ಕಂಚಿನ ಪದಕ ಸ್ವೀಕಾರ ಮಾಡಿದ ಸಂದರ್ಭದಲ್ಲಿ , ಅಮೆರಿಕಾದ ರಾಷ್ಟ್ರಗೀತೆ ನುಡಿಸಲ್ಪಡುತ್ತಿರುವಾಗ ಕಪ್ಪು ಕೈಗವಚ ಧರಿಸಿ ಅವರ ಮುಷ್ಟಿಯನ್ನು ಮೇಲಕ್ಕೆತ್ತಿ ವಿಭಿನ್ನ ರೀತಿಯ ಸೆಲ್ಯೂಟ್ ಮಾಡಿದರು . "ನಾನು ಕಪ್ಪು ಕೈಗವಚ ತೂಟ್ಟಿದ್ದೆ .ಕಪ್ಪು ಜನರ ಶಕ್ತಿಯ ಕುರುಹಾಗಿ ... , ನಾನು ಕಾಲಿಗೆ ಶೂ ಧರಿಸಿರಲಿಲ್ಲ ,ಬರೀ ಸಾಕ್ಸ್ ಧರಿಸಿದ್ದೆ ನಮ್ಮ ಬಡತನದ ಸಂಕೇತವಾಗಿ ..... , ನಾನು ಕೊರಳಿನ ಸುತ್ತ ಕಪ್ಪು ಸ್ಕಾರ್ಫ್ ಧರಿಸಿದ್ದೆ ಈ ದೇಶ ಕಟ್ಟುವ ಸಂದರ್ಭದಲ್ಲಿ ಆಫ್ರಿಕನ್ನರು ಅನುಭವಿಸಿದ್ದ ಕೊಲೆ, ದೌರ್ಜನ್ಯಗಳ ನೆನಪಿಗಾಗಿ ...."ಎಂದಿದ್ದರು ಟಾಮಿ ಸ್ಮಿತ್ ತಮ್ಮ ಕ್ರಿಯೆಯನ್ನು ಮೆಲುಕುಹಾಕುತ್ತಾ . ಈ ಸಾಂಕೇತಿಕ ಪ್ರತಿಭಟನೆಯ ಫಲವಾಗಿ ಅವರು ಅಮೆರಿಕಾದ ಕ್ರೀಡಾ ಪ್ರಾಧಿಕಾರದಿಂದ ಬಹಿಷ್ಕಾರ ಎದುರಿಸುವಂತಾಯಿತು . ವೇಗವಾಗಿ, ಎತ್ತರವಾಗಿ, ಬಲವಾಗಿ '(faster,Higher, stronger) ಎಂಬುದು ಒಲಿಂಪಿಕ್ ಕ್ರೀಡೆಯ ದ್ಯೇಯವಾಕ್ಯ . ಆದರೆ ಕ್ರೀಡಾಕೂಟದಲ್ಲಿ ಸ್ಮಿತ್ ಮತ್ತು ಕಾರ್ಲೋಸ್ ನಡೆದುಕೊಂಡ ರೀತಿಯು 'ಸಿಟ್ಟಾಗಿ, ಸಿಡುಕಾಗಿ, ಅಸಹ್ಯವಾಗಿ' ಎಂದು ವರ್ಣಿಸಲರ್ಹವಾಗಿದೆ" ಎಂದು ದಿನಾಂಕ 25/10/1968 ರ "ಟೈಮ್ಸ್" ಪತ್ರಿಕೆಯಲ್ಲಿ ವರದಿಯಾಯಿತು . ಸ್ವಗ್ರಾಮದಲ್ಲಿ ಈ ಕ್ರೀಡಾಪಟುಗಳು ತೀವ್ರ ನಿಂದನೆಗೆ ಗುರಿಯಾಗಬೇಕಾಯಿತು. ಅವರ ಪೋಷಕರಿಗೆ ಕೊಲೆ ಬೆದರಿಕೆ ಹಾಕಲಾಯಿತು . ಅದೇ ಪೋಡಿಯಂನಲ್ಲಿ ಬೆಳ್ಳಿ ಪದಕ ಸ್ವೀಕರಿಸಿದ ಅಸ್ರೇಲಿಯಾದ ಕ್ರೀಡಾಪಟು ಶ್ರೀ ಪೀಟರ್ ನಾರ್ಮನ್ ಈ ಕ್ರೀಡಾ ಪಟುಗಳ ಕ್ರಿಯೆಗೆ ತನ್ನ ಸಹಮತಿ ಸೂಚಿಸಲು "ಮಾನವ ಹಕ್ಕುಗಳಿಗಾಗಿ ಒಲಿಂಪಿಕ್ ಪ್ರಾಜೆಕ್ಟ್" ಎಂಬ ಬ್ಯಾಡ್ಜ್ ಧರಿಸಿ ಆಸ್ಟ್ರೇಲಿಯಾ ಸರ್ಕಾರದ "ಬಿಳಿಯರ ಪಕ್ಷಾಪಾತಿ ಧೋರಣೆಯನ್ನು ಖಂಡಿಸಿದರು. ಇದರ ಫಲವಾಗಿ ಅವರೂ ಸಹ ಆಸ್ಟ್ರೇಲಿಯಾ ರಾಷ್ಟ್ರೀಯ ಒಲಿಂಪಿಕ್ ಪ್ರಾಧಿಕಾರದ ಕೆಂಗಣ್ಣಿಗೆ ಗುರಿಯಾಗಿ ಮುಂದಿನ ಒಲಿಂಪಿಕ್ ನಲ್ಲಿ ರಾಷ್ಟ್ರವನ್ನು ಪ್ರತಿನಿಧಿಸುವ ಅವಕಾಶ ಕಳೆದುಕೊಳ್ಳಬೇಕಾಯಿತು . ಆದರೆ ಇದ್ಯಾವುದಕ್ಕೋ ಜಗ್ಗದೆ ತಮಗೆ ಸರಿ ಎನಿಸಿದ್ದನ್ನು ಪ್ರತಿಭನೆಯ ಮೂಲಕ ವ್ಯಕ್ತಪಡಿಸಿದ ಈ ಕ್ರೀಡಾಪಟುಗಳ ಕೊಡುಗೆ ಇಂದು ಸಮಾಜವನ್ನು ಸಮಾನತೆಯ ಕಡೆ ಕೊಂಡೊಯ್ಯುವಲ್ಲಿ ಗಣನೀಯ ಪಾತ್ರ ವಹಿಸಿದೆ. . ಎಲ್ಲೇ ಇರಲಿ, ಸಂದರ್ಭ ಯಾವುದೇ ಇರಲಿ ಅಲ್ಲಿ ಸಮಾಜಮುಖಿ ಹೋರಾಟದ ಕಹಳೆ ಮೊಳಗಿಸಲು ಹಿಂಜರಿಯದ ಈ ಸಾಧಕರು ಇಂದಿನ ದಮನಿತರಿಗೊಂದು ಸ್ಪೂತಿಯ ಸೆಲೆಯಾಗಬಹುದು ,.ಹೋರಾಟದ ಮಾರ್ಗ ಹುಡುಕ ಹೊರಟವರಿಗೆ ದಿಕ್ಸೂಚಿಯಾಗಬಹುದು . -ಕೇಶವಪ್ರಸಾದ್

Comments