ಸಾಂಸ್ಥಿಕ ಹೊಣೆಗಾರಿಕೆ ಮೆರೆದ ಸರಕಾರೀ ನೌಕರ :ಕೇಶವಪ್ರಸಾದ್ , ರಾಜ್ಯ ಖಜಾಂಚಿ ಕರ್ನಾಟಕ ರಾಜ್ಯ ಸರ್ಕಾರಿ ಎನ್ ಪಿ ಎಸ್ ನೌಕರರ ಸಂಘ,ಬೆಂಗಳೂರು


ಸಾಂಸ್ಥಿಕ ಹೊಣೆಗಾರಿಕೆ ಮೆರೆದ ಸರಕಾರೀ ನೌಕರ : - ಕೇಶವಪ್ರಸಾದ್, ದಿನಾಂಕ 20.01.2018 ರಂದು ಬೆಂಗಳೂರಿನಲ್ಲಿ ಸಾಗರದೋಪಾದಿಯಲ್ಲಿ ಹರಿದು ಬಂದ ಜನಸಮೂಹಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್ ಸಾಲದೇ ಪಕ್ಕದ ರಸ್ತೆಯಲ್ಲಿಯೇ ವೇದಿಕೆ ಕಟ್ಟಬೇಕಾಯಿತು. ಇದು ಇತಿಹಾಸ. ಆ ಸ್ಥಳದಲ್ಲಿ ಅಂತಹಾ ಜನಸ್ತೋಮ ಹಿಂದೆಂದೂ ಸೇರಿರಲಿಲ್ಲ ಎಂದು ಅಲ್ಲಿನ ಸುತ್ತಮುತ್ತಲಿನ ಜನರೇ ಹೇಳುತ್ತಾರೆ. *ಸೈನ್ಯ ಜಮಾವಣೆಯೇ ಅಂತಿಮ ವಿಜಯವಲ್ಲ*. ಆದರೆ ಅದು ನಾವು ವಿಜಯದತ್ತ ಸಾಗುತ್ತಿರುವ ಕುರುಹು. ಈ ಸೇನೆಯನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸಿದಾಗ ಮಾತ್ರ ವಿಜಯ ಪ್ರಾಪ್ತಿಯಾಗುತ್ತದೆ. ಸೇನೆಯಲ್ಲಿ ಶಿಸ್ತಿರಬೇಕು ಒಮ್ಮತವಿರಬೇಕು. ಎಲ್ಲಾ ಚಿಕ್ಕ ಪುಟ್ಟ ಅಭಿಪ್ರಾಯ ಬೇಧ, ಸ್ವಾರ್ಥಗಳನ್ನು ಬದಿಗಿಟ್ಟು "ನಿಶ್ಚಿತ ಪಿಂಚಣಿಯತ್ತ ತುಡಿದರೆ ಮಾತ್ರ ನಮ್ಮ ಕನಸು ನನಸಾಗಲು ಸಾಧ್ಯ. ಈ ನಿಟ್ಟಿನಲ್ಲಿ ಫ್ರೀಡಂ ಪಾರ್ಕಿನ ಕಡೆಗೆ ನಮ್ಮೊಂದಿಗೆ ಹೆಜ್ಜೆಹಾಕಿದ ಚಿಣ್ಣರೆ ನಮಗೆ ಆದರ್ಶ ,ಅವರೇ ನಮ್ಮ ಸ್ಪೂರ್ತಿಯ ಸೆಲೆ. ನೀವು ಸಚಿವಾಲಯ ಕ್ಲಬ್ ನಿಂದ ಫ್ರೀಡಂ ಪಾರ್ಕ್ ನವರೆಗೆ ಬೆಳೆದದ್ದು ಕೆಲವೇ ಕೆಲವು ವ್ಯಕ್ತಿಗಳನ್ನು ಅನಾವಶ್ಯಕವಾಗಿ ನಿದ್ದೆಗೆಡಿಸಿತ್ತು. ನಿಮ್ಮನ್ನು ದುರ್ಬಲರನ್ನಾಗಿ ಮಾಡುವ ಪ್ರಯತ್ನದಲ್ಲಿ ಅವರಿಗೆ ಆಶ್ರಯ ನೀಡಿದ ಸಂಘಗಳನ್ನೇ ದುರ್ಬಲಗೊಳಿಸಿದರು!. ಅವರ ಪ್ರಯತ್ನಗಳೇ ಸಂಘಟನೆಯನ್ನು ಈ ಹಂತಕ್ಕೆ ತಂದಿದೆ!. ಆದರೆ ಅನಾವಶ್ಯಕವಾಗಿ ಪ್ರಾಮಾಣಿಕ ನೌಕರರ ಕಾಲೆಳೆಯುವ ಪ್ರಯತ್ಮ ಮಾಡಿದರು. *(ಮೊನ್ನೆ ಒಂದು ಮೆಸೆಜ್ ನೋಡಿದೆ "ನಿಮ್ಮ ಕಾಲೆಳೆಯುವ ಪ್ರಯತ್ನ ಮಾಡುವವರು ನಿಮ್ಮ ಕಾಲ ಬಳಿಯೇ ಉಳಿಯುತ್ತಾರೆ"ಎಂದು)* .ಒಂದಿಬ್ಬರನ್ನು ಬಿಟ್ಟರೆ ಹೆಚ್ಚಿನ ಹಿರಿಯರು ನಮ್ಮೊಂದಿಗಿದ್ದು ದಾರಿ ತೋರಿದ್ದಾರೆ. ತಮ್ಮಂದಿರನ್ನು ಯಾವ ಅಣ್ಣಂದಿರು ಬಿಟ್ಟು ಕೊಡುತ್ತಾರೆ ನೀವೇ ಹೇಳಿ ? ಕೆಲವರು ಅಡಿಗಡಿಗೆ ಅಡ್ಡಿ ತಂದರು.ಕೆಲೆವೆಡೆ ರಜೆ ಸಿಗದಂತೆ ಮಾಡಿದರು ,ಸತ್ಯಾಗ್ರಹದಂದೇ ತರಬೇತಿಗೆ ನಿಯೋಜಿಸಿದರು. ಸತ್ಯಾಗ್ರಹ ಹೋರಾಟಕ್ಕೆ ಸಿದ್ದರಾಗುತಿದ್ದ ಎನ್ ಪಿ ಎಸ್ ನೌಕರರ ಉತ್ಸಾಹ ಕುಂದಿಸುವಂತಹಾ ಸರ್ಕಾರಿ ಆದೇಶಗಳನ್ನು ಸಾಮಾಜಿಕ ಜಾಲದಲ್ಲಿ ಹರಿಬಿಟ್ಟರು. ನಾವು ವಿಚಲಿತರಾಗಲಿಲ್ಲ. ಏಕೆ ? ನಮ್ಮ ಗುರಿ ಒಂದೇ.ಅದು ನಿಶ್ಚಿತ ಪಿಂಚಣಿ . ` ಅವರಿಗೋ ಅದು ಸ್ವಪ್ರತಿಷ್ಟೆ, ನೌಕರಕರಿಗೋ ಅದು ಭವಿಷ್ಯದ ಪ್ರಶ್ನೆ!. ಅಂತೂ ಜನವರಿ ಇಪ್ಪತ್ತು ಬಂದೇ ಬಿಟ್ಟಿತು. ಎನ್ ಪಿ ಎಸ್ ನೌಕರರು ಎದ್ದು ಬಂದ ಫೋರ್ಸಿಗೆ ಆ ಮಹಾನ್ ನಾಯಕರೆಲ್ಲಾ ಮುಂಜಾನೆ ಮಂಜಿನಂತೆ ಕರಗಿ ಹೋದರು. ಪ್ರತ್ಯಕ್ಷ ಯುದ್ಧ ಮುಗಿದ ಮೇಲೆ ಪರೋಕ್ಷ ಯುದ್ಧಕ್ಕಿಳಿದರು . ಅಮೇಲಿನದೆಲ್ಲಾ ಸೈಕಾಲಾಜಿಕಲ್ ವಾರ್ ಫೇರ್ ! ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ನಮ್ಮ ಅರಿಷಡ್ವರ್ಗಗಳನ್ನೇ ನಮ್ಮ ಮೇಲೆ ಛೂ ಬಿಡುವ ಪ್ರಯತ್ನ.... ,ತಮ್ಮ ಸಿಗ್ನೇಚರ್ ಸ್ಟೈಲಿನ ಕುಹಕದ ನಗೆ ನಗುತ್ತಾ "ಎನ್ರಪ್ಪಾ, ಅಷ್ಟೆಲ್ಲಾ ಮಾಡಿದಿರಿ, ಟಿ ವಿ ನಲ್ಲಿ ಬಂತೇನ್ರಪ್ಪಾ" ಎಂದು ಕೇಳುವಾಗ ನಮ್ಮಲ್ಲಿ ಕೆಲವರು ವಿಚಲಿತರಾಗುತ್ತಾರೆ. ಆದರೆ ಮಿತ್ರರೇ, ಅವರು ಮಾಧ್ಯಮಗಳ ಮುಖಾಂತರ ಪ್ರಚಾರ ಸಿಗದಂತೆ ನೋಡಿಕೊಂಡರೂ ಈ ಸುದ್ದಿ ವಾಟ್ಸಪ್ ನಲ್ಲಿ ಮನೆಮನೆಗೆ ತಲುಪಿತು. ನಾವು ಸಂಘಟನೆ ಮಾಡುವಾಗ ಯಾವ ಟೀವಿಯವರು,ಪೇಪರ್ನವರು ಪ್ರಚಾರ ಕೊಟ್ಟಿದ್ದರು?, ಟೀವಿ ನೋಡಿ ಮಾಜಿ ಪ್ರಧಾನಿಯವರು ನಮ್ಮ ಸಭೆಗೆ ಬಂದರಾ? ಮಾನ್ಯ ಪ್ರಧಾನಿ ಮೋದಿಯವರೇ ಸೆಲ್ಫಿ ತೆಗೆದುಕೊಳ್ಳುವ ಈ ಕಾಲದಲ್ಲಿ ಫೋಟೋಗ್ರಾಫರ್ ಬಂದು ಫೋಟೋ ತೆಗೆದರೆ ಮಾತ್ರ ಜನ್ಮ ಸಾರ್ಥಕ ಆಗೋದು ಎನ್ನುವ ಓಲ್ಡ್ ಫ್ಯಾಶನ್ ಆಲೋಚನೆಗಳಿಗೆ ನಾವ್ಯಾಕೆ ಬಲಿಯಾಗಬೇಕು? ಆ ದಿನದ ಹೋರಾಟ ಮಾಧ್ಯಮದಲ್ಲಿ ವರದಿಯಾಗಿದ್ದರೆ ಅಥವಾ ಒಂದು ಪೇನಲ್ ಚರ್ಚೆಯ ವಸ್ತುವಾಗಿದ್ದರೆ ಸರ್ಕಾರ ಮರುದಿನವೇ ಈ ಯೋಜನೆಯನ್ನು ಕಿತ್ತು ಹಾಕುತ್ತಿತ್ತೇ? ಅಂದಹಾಗೆ ಮಾಧ್ಯಮದಲ್ಲಿ ವರದಿಯಾಗಿರುವ ಕಾವೇರಿ, ಮಹದಾಯಿ, ಎತ್ತಿನಹೊಳೆ,ದತ್ತಪೀಠ, ರಾಜಾಕಾಲುವೆ ಒತ್ತುವರಿ,ಬೆಳ್ಳಂದೂರು ಕೆರೆಯನೊರೆ, ಇವೆಲ್ಲಾ ಪರಿಹಾರ ಕಂಡಿವೆಯೇ ? ಪರಿಹಾರ ಇರಲಿ ,ಇಲ್ಲಸಲ್ಲದ್ದನ್ನೆಲ್ಲಾ ಕೆದಕಿ ಪರಿಸ್ಥಿತಿಯನ್ನು ಇನ್ನಷ್ಟು ಜಟಿಲಮಾಡಿಬಿಟ್ಟಾವು ಎಚ್ಚರಿಕೆ . ದಿನ ಬೆಳಗಾದರೆ ಸರಕಾರಿ ನೌಕರರಿಗೆ ಭತ್ಯೆ ಹೆಚ್ಚಳ ಆಯಿತು ಬಂಪರ್ ಭಾಗ್ಯ ಸಿಕ್ಕಿತು ಎಂದು ಇಲ್ಲದ್ದನ್ನಲ್ಲಾ ಬರೆದು ನಮ್ಮ ಕುಟುಂಬಗಳಿಗೆ ಖುಷಿಕೊಡುವ ಮಾದ್ಯಮಗಳು ಪಿಂಚಣಿ ಸಮಸ್ಯೆಗಿಂತಾ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆಯನ್ನೇ ಚರ್ಚಿಸುವ ಸಾದ್ಯತೆ ಇತ್ತು. ತೊಂಬತ್ತು ಶೇಕಡಾ ಮೀಡಿಯಾಗಳು ಬಂಡವಾಳಗಾರರ ಕೈಯಲ್ಲೇ ಇದೆ.ಎಲ್ಲರೂ ಸಂಪನ್ಮೂಲಕ್ಕಾಗಿ ಷೇರುಪೇಟೆಯತ್ತ ಮುಖ ಮಾಡಿದವರರೇ .NPS ರದ್ದಾದರೆ ಆವರಿಗೆ & ಅವರಿಗೆ ಜಾಹಿರಾತು ಕೊಡುವವರಿಗೆ ನಷ್ಟ ಹೆಚ್ಚು !. ಜೊತೆಗೆ ಅವ್ನಕರಿಲಿಲ್ಲ,ಇವ್ನಕರೀರಿಲ್ಲ ಅಂತ‌ ಅದ್ಬೇರೆ. ಆದ್ರೂ.... ಆದ್ರೂ ...ಆದ್ರೂ.... ಅನ್ನೋ ನೋವಿದೆ .. ಆ ದುಃಖವನ್ನು ಗುಣಪಡಿಸುವ ಶಕ್ತಿ ಇರುವುದು ಕಾಲಕ್ಕೆ ಮಾತ್ರ . . ೨. ಯಾರೂ ಬರಲಿಲ್ಲ .... , ಇದುವರೆಗೆ ಪ್ರತಿಭಟನೆ ಎಂದರೆ ಒಂದು ದಿನ ಓಓಡಿ ಪಡೆದು ಪ್ರತಿಭಟನೆಗೆ ತೆರಳಿ ಭೋಜನ ಮಾಡಿ "ಸಮಸ್ಯೆಯನ್ನು ಬಗೆಹರಿಸಲಾಗಿದೆ"ಎಂಬ ಸರ್ಕಾರದ ನಿರ್ಧಾರವನ್ನು ನಾಯಕರಿಂದ ಕೇಳಿ ಸಂತೋಷದಿಂದ ಹಿಂತಿರುಗುವ ಪ್ರಸಂಗಗಳೇ ಹೆಚ್ಚು. ಕೃತಕ ಸಮಸ್ಯೆಗಳನ್ನು ಸೃಷ್ಟಿಸಿ ಅದು ಪರಿಹಾರ ಕಂಡುಕೊಳ್ಳುವ ದಿನ ಅಣಕು ಧರಣಿಗಳ ಮೂಲಕ ಪರಿಹಾರ ಕೊಡಿಸುವ ನಾಟಕಗಳನ್ನು ನೋಡಿ ನೋಡಿ ರೂಡಿಯಾದವರಿಗೆ "ಸುಖಾಂತ್ಯ " ನೋಡದೇ ಹೋದರೇ ಪ್ರಸಂಗ ಅಪೂರ್ಣವೆನ್ನಿಸುವುದು ಸಹಜ.. ಇಂತಹಾ ಪ್ರಸಂಗಗಳಿಗಾಗಿಯೇ ಸಮಸ್ಯೆ ಸೃಷ್ಟಿಸಲಾಗುತಿತ್ತೋ ಏನೋ ಎಂಬ ಗುಮಾನಿ ಹುಟ್ಟುತ್ತದೆ. ಅಂತಹಾ ಪೂರ್ವಯೋಜಿತ ಪ್ರಹಸನಗಳು painkiller tablet ನಂತೆ ಕೆಲಸ ಮಾಡುತ್ತಿದ್ದವು. ಸಮಸ್ಯೆ ತನ್ನಷ್ಟಕ್ಕೆ ನಿವಾರಣೆಯಾಗುವವರೆಗೆ ನಮ್ಮನ್ನು ಒಂದು ರೀತಿ ಅಮಲಿನಲ್ಲಿ ಇಡುತಿದ್ದವು.ಇವೇ ನಿಜವಾದ ಹೋರಾಟ ಎಂಬ ಭ್ರಮೆಯಲ್ಲಿ ಮುಳುಗಿದ್ದ ನೌಕರವರ್ಗಕ್ಕೆ ನಿಜವಾದ ಹೋರಾಟ ಎಂದರೆ ಏನು ಎಂದು ತಿಳಿದಿದ್ದು NPS ಎಂಬ ವಿದೇಶೀ ಸಮಸ್ಯೆ ಬಂದಾಗಲೇ. .ಇದು ಬಂದಾಗ ನೌಕರರ ಮನಸ್ಸನ್ನು ಈ ಸಮಸ್ಯೆಯಿಂದ ದೂರ ಇಡಲು, ಅಥವಾ ಈ ಸಮಸ್ಯೆಯ ಒತ್ತಡ ಮರೆಮಾಚಲು ಎರಡು ವರ್ಷಗಳ ಹಿಂದೆಯೇ ಒಂದು ಫ್ರೀಡಂ ಪಾರ್ಕ್ ಹೋರಾಟ ನಡೆಯಿತು .ಅಲ್ಲಿ "ಮಹಾನ್ ನಾಯಕರು " ತಾವೇ ಕರೆತಂದಿದ್ದ 25-30 ಮಂದಿಯ ಸಮೂಹಕ್ಕೆ ನೀತಿಪಾಠ ಹೇಳುವ ಶಾಸ್ತ್ರ ಮಾಡಿ ಮುಗಿಸಿದರು. ಆದರೆ ಇಂತಹಾ ಅರಿವಳಿಕೆಯ ಗುಳಿಗೆಯನ್ನು ತೆಗೆದು ಕೊಳ್ಳಲು ನಿರಾಕರಿಸುತ್ತಲೇ ಬಂದ ನೌಕರ ನೋವಿನಿಂದ ಪ್ರೀಡಂಪಾರ್ಕಗೆ ಹೋಗುತ್ತಾನೆ ಎಂಬ ಸಂಗತಿ ಕಿವಿಗೆ ಬಿದ್ದೊಡನೆ ತರಾತುರಿಯಲ್ಲಿ ಒಂದು ಎನ್ ಪಿ ಎಸ್ ಅಣಕು ಪ್ರದರ್ಶನ "ಮಾಡಿ ಮುಗಿಸಿದರು. ಎನ್ ಪಿ ಎಸ್ ನೌಕರರರನ್ನು ಅಲ್ಲಲೇ (ಜಿಲ್ಲೆ ,ತಾಲೂಕಿನಲ್ಲೇ) ಹಿಡಿದಿಟ್ಟುಕೊಳ್ಳಿ ,ಬಿಡಬೇಡಿ ಎಂದು ಲೋಕಲ್ ವೈದ್ಯರಿಗೆ (ಹಿರಿಯರಿಗೆ) ಠರಾವು ಹೊರಡಿಸಿದರು.ಆದರೆ, ಹಳ್ಳಿಯ ಚಿಕ್ಕ ವೈದ್ಯರು ನಗರದ ದೊಡ್ಡ ವೈದ್ಯರಷ್ಟು ಮನಿ ಮೈಂಡೆಡ್ ಇರುವುದಿಲ್ಲ .ಆದ್ರಿಂದ "ನೋಡ್ರಪ್ಪಾ, ನಿಮ್ಮ ರೋಗ ಗುಣ ಆಗಬೇಕು ಎಂದರೆ ನೀವು ಬೆಂಗಳೂರಿಗೆ ಹೋಗಲೇಬೇಕು" ಅಂತಾ ಬೆನ್ನು ತಟ್ಟಿ ಕಳಿಸಿದರು. ಪರಿಹಾರ ಹುಡುಕಿಕೊಂಡು ಬೆಂಗಳೂರಿಗೆ ಬಂದ ನೌಕರರಿಗೂ ಗೊತ್ತು, ಇದೊಂದು ದೇಶದಾದ್ಯಂತ ಹಬ್ಬಿರುವ ರೋಗ ಇದು ಮಾತ್ರೆ,ಟಾನಿಕ್ ನಿಂದ ವಾಸಿ ಆಗಲ್ಲ, ಇದಕ್ಕೆ ಮೇಜರ್ ಸರ್ಜರಿಯೇ ಬೇಕು ಅಂತಾ. ಈಗ ನೋಡಿ, ಈ ಏನ್ ಪಿ ಎಸ್ ನ ಸರ್ಜರಿಗೆ ನಮಗೆ ಸಿಕ್ಕಿರುವ ಡಾಕ್ಟ್ರೆ ಮಾಜಿ ಪ್ರಧಾನಿ .ಹೆಚ್ ಡಿ ದೇವೇಗೌಡರು !!. ನಮ್ಮ ಹೋರಾಟದಿಂದ ಏನಾಯಿತು ? a. ಮನವಿ ಕೊಟ್ಟರೆ ಅದು ಕಸದಬುಟ್ಟಿಗೆ ಹೋಗುತ್ತೆ. ಅಥವಾ ಇದು ಉತ್ತಮವಾದ ಸ್ಕೀಮ್ ಅಂತ‌ ಪತ್ರ ಉತ್ತರ ಬರುತ್ತೆ.. ಆದರೆ ಇಂದು ಇದೆ ನೌಕರರ ಪರವಾಗಿ ಮಾಜಿ ಪ್ರಧಾನಿಯವರೇ ಕಣಕ್ಕಿಳಿದಿದ್ದಾರೆ. ಇದು ಇತರೆ ಪಕ್ಷಗಳನ್ನು ಸಹಾ ಚಿಂತನೆಗೆ ಹಚ್ಚಿದೆ. ಎಲ್ಲದಕ್ಕೂ ಹೈಕಮಾಂಡ್ ಕೇಳುವ ಅನಿವಾರ್ಯತೆ ಇರುವ ರಾಷ್ಟ್ರೀಯ ಪಕ್ಷಗಳ ಮನವೊಲಿಸಲು ಕರ್ನಾಟಕ ರಾಜ್ಯ ಎನ್ ಪಿ ಎಸ್ ನೌಕರರ ಸಂಘ ರಾಷ್ಟ್ರೀಯ ನಾಯಕರೊಂದಿಗೆ ಸೇರಿ ಯೋಜನೆ ರೂಪಿಸಿದೆ . b. ಹಿಂದೆ ಕರ್ನಾಟಕದ ನೌಕರರು ಯಾವುದೇ ಹೋರಾಟಕ್ಕೆ ಬರುವುದಿಲ್ಲ ಎಂಬ ಕಾರಣದಿಂದ ರಾಷ್ಟ್ರೀಯ ಸಂಯೋಜನೆ ಕಳೆದುಕೊಂಡಿತ್ತು. ಆದರೆ ಇಂದು ನಿಮ್ಮೆಲ್ಲರ ಪರಿಶ್ರಮದಿಂದ ಕರ್ನಾಟಕದ ನೌಕರರರನ್ನು ಇಡೀ ಭಾರತದ ನೌಕರ ಸಮುದಾಯ ಗುರುತಿಸುವಂತಾಗಿದೆ. c. ದೇಶದ ಆರ್ಥಿಕ ಬೆಳವಣಿಗೆ ಶೇರು ಪೇಟೆಯ ಏರಿಕೆಯನ್ನೇ ಮಾನದಂಡವಾಗಿ ಪರಿಗಣಿಸುವ ಈ ಕಾಲಘಟ್ಟದಲ್ಲಿ ಬಲಪಂಥೀಯ ಚಿಂತಕರೆಂದು ಹೇಳಲಾದ ಶ್ರೀ ಚಕ್ರವರ್ತಿ ಸೂಲಿಬೆಲೆಯವರೇ ಷೇರು ಮಾರ್ಕೆಟ್ ನ ಅಪಾಯಗಳ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. d. ನಾವು ಹುಲಿ ಮರಿಗಳು ಎಂದುಕೊಂಡಿದ್ದವರಿಗೆ ಅವರು ಮರಿಗಳಲ್ಲ, *ಹುಲಿಗಳೇ* ಎಂಬ ಮನವರಿಕೆಯನ್ನು ಈ ಹೋರಾಟ ಮಾಡಿಕೊಟ್ಟಿದೆ. e. ನೂರ ನಲವತ್ತಕ್ಕಿಂತಲೂ ಹೆಚ್ಚು ಸಂಘಗಳು ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿವೆ . ಈಗ ಸೈನ್ಯ ಜಮಾವಣೆಯಾಗಿದೆ. ನಾವೀಗ ಹೋರಾಟದ ಪರಿಧಿಯಲ್ಲೇ ಇದ್ದೇವೆ. ಎಲ್ಲಾ ನೌಕರರು ಇತಿಹಾಸ ಓದಿರುವುದರಿಂದ ಪಲಾಯನವಾದ ಪಠಿಸುವ ಪ್ರಶ್ನೆಯೇ ಉಧ್ಭವಿಸುವುದಿಲ್ಲ. ನಾವು ಮೂರು ಲಕ್ಷ ನೌಕರರಿದ್ದೇವೆ. ಈ ಸೇನೆಯ ಶಿಸ್ತನ್ನು ಶತಾಯ ಗತಾಯ ಕಾಪಾಡಿಕೊಳ್ಳುವ ಅನಿವಾರ್ಯತೆ ಈ ದಿನಗಳಲ್ಲಿ , ಕೆಲವರಿಗೆ , ಕೆಲವು‌ಬಾರಿ, ಕೆಲವು ಕಾರಣಗಳಿಂದ ಸಮಸ್ಯೆಯಾಗಬಹುದು. ಆದರೆ ಎಲ್ಲರಿಂದ ಎಲ್ಲಾ ವಿಷಯಗಳಿಂದ ಯಾವಾಗಲೂ ಸಮಸ್ಯೆ ಯಾಗುವುದಿಲ್ಲ.ಆದುದರಿಂದ ಸಮಸ್ಯೆ ಗಳನ್ನು ನಿರ್ದಾಕ್ಷಿಣ್ಯವಾಗಿ ನಿಭಾಯಿಸುವ ಹಾಗೂ ನಮ್ಮ ಹೋರಾಟವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವ ಜವಾಬ್ದಾರಿ ಅದ್ಯಕ್ಷರ ಮೇಲಿದೆ. ಯಾರು ಫಲಾಪೇಕ್ಷೆಯಿಲ್ಲದೆ ಮೊದಲಿನಿಂದಲೂ ಸಂಘಟನೆಯಲ್ಲಿದ್ದಾರೆ,ಯಾರು ಇಂದು ನಮ್ಮ ಯಶಸ್ಸನ್ನು ನೋಡಿ ಸಂಘದ ಕಡೆ ವಾಲುತಿದ್ದಾರೆ? ಅವರ ಉದ್ದೇಶಗಳೇನು ? ಅವರ ಚರಿತ್ರೆ ಏನು ಚರಿತ್ರೆಯೇನು ? ಚಾರಿತ್ಯವೇನು ? ಎಂದೆಲ್ಲಾ ಅತಿ ಜಾಗರೂಕತೆಯಿಂದ ಗಮನಿಸಿಕೊಂಡು ಎನ್ ಪಿ ಎಸ್ ನೌಕರರ ಒಗ್ಗಟ್ಟನ್ನು ಕಾಪಾಡಿಕೊಳ್ಳುವುದು ಹೋರಾಟದ ಒಂದು ಭಾಗ. ಇದು ರಾಜ್ಯಾದ್ಯಕ್ಷರ ಹಾಗೂ ನಮ್ಮೆಲ್ಲರ ಜವಾಬ್ದಾರಿ ಕೂಡ. ಮಿತ್ರರೇ, ನಿಶ್ಚಿತ ಪಿಂಚಣಿ ನಮ್ಮ ಗುರಿ. ಪಡೆದೇ ತೀರೋಣ. #ಕೇಶವಪ್ರಸಾದ್ , ರಾಜ್ಯ ಖಜಾಂಚಿ ಕರ್ನಾಟಕ ರಾಜ್ಯ ಸರ್ಕಾರಿ ಎನ್ ಪಿ ಎಸ್ ನೌಕರರ ಸಂಘ,ಬೆಂಗಳೂರು

Comments