ಪ್ರತಿಭಟನೆಯ ಪುಟಗಳಿಂದ ಭಾಗ -2 :------ಕೇಶವ ಪ್ರಶಾದ್ KSGNPSEA

#ಪ್ರತಿಭಟನೆಯಪುಟಗಳಿಂದ :(ಭಾ -೨) ನಮ್ಮ ರಾಜ್ಯ ಸರ್ಕಾರಿ ನೌಕರರ ವೇತನ ಸೌಲಭ್ಯಗಳಿಗೆ ಹೋಲಿಸಿದರೆ ಬ್ಯಾಂಕುಗಳು ಇತ್ಯಾದಿ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿರುವ ಸೌಲಭ್ಯಗಳು ಆಕರ್ಷಣೀಯವಾಗಿ ಕಾಣುತ್ತದೆ. ಕೆಲವು ಸಾರ್ವಜನಿಕ ವಲಯದ ಸಂಸ್ಥೆಗಳು ನೌಕರರಿಗೆ ನಿವೃತ್ತಿ ನಂತರವೂ ಸಿಗುವ ಸೌಲಭ್ಯಗಳು ಚೆನ್ನಾಗಿದೆ 👌🏻 ಆದರೆ ಈ ಸೌಲಭ್ಯಗಳು ಅವರಿಗೆ ಸುಲಭವಾಗಿ ದಕ್ಕಿದ್ದಲ್ಲ. ಅದಕ್ಕಾಗಿ ಹಲವು ಹೋರಾಟಗಳು ನಡೆದಿದೆ. ಈ ಹೋರಾಟದ ಅನುಭವಗಳು ಎನ್ ಪಿ ಎಸ್ ವಿರೋಧಿ ಹೋರಾಟಕ್ಕೆ ಮಾರ್ಗದರ್ಶನವಾಗಬಹುದು.ಈ ಹಿನ್ನೆಲೆಯಲ್ಲಿ 26.12. 1980ರಿಂದ 12.3. 1981ರವರೆಗೆ ಹಾಗೂ 6.5.1981ರಿಂದ ಸುಮಾರು 28 ದಿನಗಳ ಕಾಲ ನಡೆದ ಸಾರ್ವಜನಿಕ ಉದ್ದಿಮೆಗಳ ಒಂದು ಲಕ್ಷಕ್ಕೂ ಹೆಚ್ಚು ಕಾರ್ಮಿಕರ ದಿಟ್ಟ ಹೋರಾಟದ ಪಕ್ಷಿನೋಟ ಇಲ್ಲಿದೆ.👇 ಈ ಧೀರೋದಾತ್ತ ಹೋರಾಟ ಬೆಂಗಳೂರಿನ ಸಾರ್ವಜನಿಕ ವಲಯದ ಕಾರ್ಮಿಕ ಆಂದೋಲನದ ದೌರ್ಬಲ್ಯಗಳನ್ನು, *ಮಾನ್ಯತೆ ಪಡೆದ ಮುಖಂಡತ್ವದ ಸಮಯಸಾಧಕತನ ವನ್ನು* ಎತ್ತಿತೋರಿಸಿತು ಎಂಬುದನ್ನು ಸಹಾ ನಾವು ಗಮನಿಸಬೇಕು. ಕಾರ್ಮಿಕರ ಈ ಐತಿಹಾಸಿಕ ಮುಷ್ಕರ ಆರಂಭಗೊಂಡಿದ್ದು ಪ್ರಮುಖ ಸಾರ್ವಜನಿಕ ಉದ್ದಿಮೆಯಾಗಿದ್ದ ಬಿಹೆಚ್ಇಎಲ್ನಲ್ಲಿ, ಅದು ಅಖಿಲ ಭಾರತ ಮಟ್ಟದಲ್ಲಿ ನೀಡುತ್ತಿದ್ದ ವೇತನ ಮಟ್ಟಕ್ಕೆ ಸರಿ ಸಮಾನವಾದ ವೇತನವನ್ನು ಪಡೆಯುವುದಕ್ಕೆ. 1977ರಲ್ಲೇ ದೇಶಾದ್ಯಂತವಿದ್ದ ಸಾರ್ವಜನಿಕ ವಲಯದ ಕಾರ್ಮಿಕರ ವೇತನ ಪರಿಷ್ಕರಣೆಯಾಗಬೇಕಿತ್ತು. 1975ರಲ್ಲಿ ತುರ್ತುಪರಿಸ್ಥಿತಿಯ ಕಾರಣ ಕೇಂದ್ರ ಸರ್ಕಾರ ಅದನ್ನು ತಡೆಹಿಡಿದಿತ್ತು. ನಂತರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಜನತಾಪಾರ್ಟಿ ಸರ್ಕಾರವು ಈ ದಿಸೆಯಲ್ಲಿ ಕ್ರಮ ಕೈಗೊಳ್ಳದೆ ಸಾರ್ವಜನಿಕ ವಲಯದ ಕಾರ್ಮಿಕರು ಹೆಚ್ಚು ಸಂಬಳ ವೇತನ ಪಡೆಯುತ್ತಿದ್ದು, ವೇತನ ಹೆಚ್ಚಳದ ಅಗತ್ಯವಿಲ್ಲವೆಂದು ಅಭಿಪ್ರಾಯಪಟ್ಟಿತು. *ಜೊತೆಗೆ ಈ ಕುರಿತು ‘ಭೂತಲಿಂಗಂ ಸಮಿತಿ’(1977)ಯನ್ನು ನೇಮಿಸಿತಲ್ಲದೆ ಸಮಿತಿ ವರದಿ ನೀಡುವವರೆಗೆ ಯಾವುದೇ ಸಾರ್ವಜನಿಕ ವಲಯದ ಉದ್ದಿಮೆಯಲ್ಲಿ ವೇತನ ಮಾತುಕತೆ ನಡೆಯಬಾರದೆಂದು ‘ಬ್ಯೂರೋ ಆಫ್ ಪಬ್ಲಿಕ್ ಎಂಟರ್ಪ್ರೈಸಸ್’ (ಬಿ.ಪಿ.ಇ) ಮೂಲಕ ಆದೇಶ ಹೊರಡಿಸಿತು.* ಇದರಿಂದ ಕುಪಿತಗೊಂಡ ಕಾರ್ಮಿಕ ವರ್ಗದಿಂದ ದೇಶಾದ್ಯಂತ ಈ ‘ಬಿ.ಪಿ.ಇ ನಿರ್ದೇಶನಗಳು’ ಮತ್ತು ಭೂತಲಿಂಗಂ ಸಮಿತಿಗೆ ವ್ಯಾಪಕ ವಿರೋಧ ವ್ಯಕ್ತವಾಯಿತು.(ನಮ್ಮಲ್ಲಿ ಸಮಿತಿಗಳ ರಚನೆಯನ್ನು ಹಾರ ಹಾಕಿ ಸ್ವಾಗತಿಸುವರಿದ್ದಾರೆ!) 1978 ಜನವರಿಯಲ್ಲಿ ಈ ಸಂಬಂಧ ಒಂದು ದಿನದ ಸಾಂಕೇತಿಕ ಮುಷ್ಕರ ನಡೆಯಿತು. ನಂತರ ಕೇಂದ್ರ ಸರ್ಕಾರ ವೇತನ ಮಾತುಕತೆಗಳು ನಡೆಯಬಹುದು ಎಂದಿತಾದರೂ ಕನಿಷ್ಟ ವೇತನ ಹೆಚ್ಚಿಸಬಾರದು, ತುಟ್ಟಿಭತ್ಯದ ಹೊಂದಾಣಿಕೆ ಅಂಶವನ್ನು ಹೆಚ್ಚಿಸಬಾರದೆಂಬ ಮಿತಿಯನ್ನು ಹೇರಿತು. ಕೇಂದ್ರ ಸರ್ಕಾರದ ಈ ಧೋರಣೆಯನ್ನು ಬದಲಾಯಿಸಬೇಕೆಂದು ಸಾರ್ವಜನಿಕ ವಲಯದ ಉದ್ದಿಮೆಗಳ ಕಾರ್ಮಿಕರು ಅಖಿಲ ಭಾರತ ಮಟ್ಟದ ಹೋರಾಟದ ಅಗತ್ಯವನ್ನು ಮನಗಂಡು 15 5 1978ರಂದು ದೆಹಲಿಯಲ್ಲಿ ಕಾರ್ಮಿಕ ಸಂಘಗಳ ಸಭೆ ನಡೆಸಿದರು. ಈ ಮಧ್ಯೆ ಕೇಂದ್ರ ಸರ್ಕಾರವು ವಿವಿಧ ಘಟಕಗಳಲ್ಲಿ ಸ್ವತಂತ್ರವಾಗಿ ಚೌಕಾಶಿ ನಡೆದಲ್ಲಿ ತಾನು ಮಧ್ಯ ಪ್ರವೇಶಿಸುವುದಿಲ್ಲ ಎಂದಿತು. ಇದೇ ಹಿನ್ನೆಲೆಯಲ್ಲಿ ಬಿ.ಹೆಚ್.ಇ.ಎಲ್.ನಲ್ಲಿ ಜನವರಿ 8-9-1980ರಂದು ಮಾತುಕತೆಗಳು ನಡೆದ ಪರಿಣಾಮ ಕನಿಷ್ಠ ವೇತನವನ್ನು 500ರೂ. ಮಾಡುವ ಒಪ್ಪಂದಕ್ಕೆ ಬರಲಾಯಿತು. ಬೆಂಗಳೂರಿನ ಇತರೆ ಸಾರ್ವಜನಿಕ ವಲಯದ ಸಂಘಗಳು ಮಾಡಿಕೊಂಡ 1978ರ ಒಪ್ಪಂದದಲ್ಲಿ 400 ರೂ. ಕನಿಷ್ಠ ವೇತನವಿದ್ದಿತು. ಜೊತೆಗೆ ಆ ಒಪ್ಪಂದದಲ್ಲಿ ಬೇರೆ ಸಾರ್ವಜನಿಕ ವಲಯದ ಉದ್ದಿಮೆಯಲ್ಲಿ ವೇತನ ಹೆಚ್ಚಳವಾದರೆ ಬೆಂಗಳೂರಿನಲ್ಲೂ ಅದನ್ನು ಅನ್ವಯಿಸಬೇಕೆನ್ನುವ ಒಂದು ಅಂಶವು ಇತ್ತು. ಬಿ.ಇ.ಎಲ್. ಕಾರ್ಖಾನೆಯ ಸಿಐಟಿಯು ಬೆಂಬಲಿಗಳು ಈ ಒಪ್ಪಂದದ ಸಂಪೂರ್ಣ ಮಾಹಿತಿಯನ್ನು 27 7 1980ರ ಸುತ್ತೋಲೆ ಮೂಲಕ ಕಾರ್ಮಿಕರ ಮುಂದಿಟ್ಟಿತಲ್ಲದೆ ರೂ.78ರ ವ್ಯತ್ಯಾಸ ಇರುವುದನ್ನು ಕೊಡಬೇಕೆಂದು ಒತ್ತಾಯವನ್ನು ಮುಂದಿಟ್ಟಿತು. ಕಾರ್ಮಿಕರಿಂದ ಇದಕ್ಕೆ ವ್ಯಕ್ತವಾದ ಬೆಂಬಲದ ಹಿನ್ನೆಲೆಯಲ್ಲಿ ಬೆಂಗಳೂರಿನ ಸಾರ್ವಜನಿಕ ವಲಯದ ಕಾರ್ಮಿಕ ಸಂಘಟನೆಗಳ ‘ಜಂಟಿ ಕ್ರಿಯಾ ರಂಗ’ ಬಿ.ಹೆಚ್.ಇ.ಎಲ್.ನೊಡನೆ ಸಮಾನ ವೇತನದ ಬೇಡಿಕೆಯನ್ನು ಮುಂದಿಟ್ಟಿತು. ಹಾಗೂ ಅದು ಕೇಳಿದ ವ್ಯತ್ಯಾಸ ರೂ.35 ಮಾತ್ರ. ಆದರೆ ಆಡಳಿತ ವರ್ಗಗಳು ಇದನ್ನು ನೀಡಲೂ ನಿರಾಕರಿಸಿದ್ದು 26 12 1980ರಿಂದ ಐತಿಹಾಸಿಕ ಕಾರ್ಮಿಕರ ಮುಷ್ಕರ ಆರಂಭವಾಯಿತು. 6 1 1981ರಂದು ಬೆಂಗಳೂರಿನಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಸೇರಿ ಒಂದು ಸೌಹಾರ್ದ ಸಮಿತಿಯನ್ನು ರಚಿಸಿಕೊಂಡಿದ್ದು, 21 1 1981ರಂದು ಬೆಂಗಳೂರು ಬಂದ್ ನಡೆಸಿತು. ಅಂದು 3 ಜೀವಗಳ ಬಲಿಯಾದವು ಆದರೂ ಹೋರಾಟ ನಿಲ್ಲಲಿಲ್ಲ. ಸೌಹಾರ್ದ ಸಭೆಗಳು, ಪಿಕೆಟಿಂಗ್ಗಳು ಮುಂದು ವರೆದವು. 11 3 1981ರಂದು ಬೆಂಗಳೂರಿನ ಸಾರ್ವಜನಿಕ ವಲಯದ ಕಾರ್ಮಿಕರಿಗೆ ಬೆಂಬಲವಾಗಿ ಅಖಿಲ ಭಾರತ ಮುಷ್ಕರವು ನಡೆಯಿತು. ಜೆಎಎಫ್ 12 1 1981ರಂದು ಮುಷ್ಕರವನ್ನು ಹಿಂತೆಗೆದುಕೊಂಡಿತಾದರೂ ಕಾರ್ಮಿಕರ ಅಸಮಾಧಾನ ಮುಂದುವರೆಯಿತು. ಮುಂದೆ 6 5 1981ರಂದು ಬೆಂಗಳೂರಿನ ಸಾರ್ವಜನಿಕ ವಲಯದ ಉದ್ದಿಮೆಗಳ ಆಡಳಿತ ವರ್ಗಗಳು ಹಿಂಸಾಚಾರದ ನೆಪವೊಡ್ಡಿ ಲಾಕ್ಔಟ್ ಘೋಷಿಸಿದವು. ಇದರಿಂದ ಪುನಃ ಕಾರ್ಮಿಕ ಮುಷ್ಕರ 28 ದಿನಗಳ ಕಾಲ ಮುಂದುವರೆಯಿತು. ಕೊನೆಗೂ ಆಡಳಿತ ವರ್ಗಗಳು ಕನಿಷ್ಠ ವೇತನವನ್ನು 500 ರೂ.ಗೇರಿಸುವ ಒಪ್ಪಂದದೊಂದಿಗೆ ಲಾಕ್ಔಟ್ ತೆರವಾಯಿತು. ಈ ಮುಷ್ಕರದಿಂದಾಗಿ ಮುಂದೆ ಬಿ.ಇ.ಎಲ್.ನಲ್ಲಿ ಕಾರ್ಮಿಕ ಚಳವಳಿಯಲ್ಲಿ ಒಂದು ಹೊಸ ಅಧ್ಯಾಯವೇ ಆರಂಭವಾಯಿತು. *ಅದುವರೆಗೆ ಬಿ.ಇ.ಎಲ್. ಆಡಳಿತ ವರ್ಗ ಮಾತುಕತೆಗೆ ಅರ್ಹವೆನಿಸುವ ಸಂಘವನ್ನು ಯಾವುದೇ ಮಾರ್ಗಸೂಚಿಗಳನ್ನು ಇಟ್ಟುಕೊಳ್ಳದೇ ತನಗೆ ಬೇಕಾದ ರೀತಿಯಲ್ಲಿ ಆಹ್ವಾನಿಸುತ್ತಿತ್ತು*. ಕಾರ್ಮಿಕರು ಇದನ್ನು ಒಪ್ಪದೆ ಗುಪ್ತ ಮತದಾನದಿಂದ ಆರಿಸಬೇಕೆಂದು ಬೇಡಿಕೆಯನ್ನಿತ್ತು ಅದು ತಿರಸ್ಕಾರಗೊಂಡಾಗ ಆಮರಣಾಂತ ಉಪವಾಸ ಸತ್ಯಾಗ್ರಹಗಳನ್ನು ಕೈಗೊಂಡರು(1987). ಕೊನೆಗೆ ಕೇಂದ್ರ ಕಾರ್ಮಿಕ ಮಂತ್ರಿಗಳು ಹಾಗೂ ಕೇಂದ್ರ ಲೇಬರ್ ಕಮಿಷನರ್ ಅವರ ಮದ್ಯಸ್ಥಿಕೆಯಿಂದ ಗುಪ್ತ ಮತದಾನದಿಂದ ಆಯ್ಕೆಯಾದ ಸಂಘವನ್ನು ಮಾತುಕತೆಗೆ ಆಹ್ವಾನಿಸಬೇಕೆನ್ನುವ ಪದ್ಧತಿ ಆಚರಣೆಗೆ ಬಂದಿತು. *1986 87ರಲ್ಲಿ ಬಿ.ಇ.ಎಲ್.ನ್ನು 3 ಪ್ರತ್ಯೇಕ ಘಟಕಗಳಾಗಿ ಒಡೆಯುವ ಯೋಜನೆಯನ್ನು ಕೈಬಿಡುವಲ್ಲಿ ಕಾರ್ಮಿಕರ ಪಾತ್ರ ಮಹತ್ವದ್ದು*. ಹಾಗೇ ಅವರ 1995ರ ವೇತನ ಒಪ್ಪಂದದಲ್ಲಿ ಅಭೂತಪೂರ್ವ ಹೆಚ್ಚಳವನ್ನು ಪಡೆದರಲ್ಲದೆ ಇತರೆ ಸೌಲಭ್ಯಗಳನ್ನು ಹೊಂದಿದರು. ಮುಂದೆ ಬೆಂಗಳೂರಿನ ಇತರೆ ಸಾರ್ವಜನಿಕ ಉದ್ದಿಮೆಗಳಲ್ಲೂ ಇವುಗಳನ್ನು ಅಳವಡಿಸಿಕೊಳ್ಳಲಾಯಿತು. ಬಿ.ಹೆಚ್.ಇ.ಎಲ್. ಕಾರ್ಮಿಕರು ಇತ್ತೀಚೆಗೆ ಶೇ.25 ಮನೆ ಬಾಡಿಗೆ ಭತ್ಯೆ ಪಡೆದಿದ್ದು ಇದು ಬಹುದೊಡ್ಡ ಸಾಧನೆಯಾಗಿದೆ. ಕಾರ್ಮಿಕ ಹೋರಾಟಗಳು ಹಲವು ಹಂತಗಳನ್ನು ಹೊಂದ್ದಿದ್ದು ಇಲ್ಲಿ ಯಶಸ್ಸಿಗೆ ಯಾವುದೇ ಅಡ್ಡ ದಾರಿಗಳಿಲ್ಲ ಎಂಬುದನ್ನು ನೌಕರರು ಅರಿತುಕೊಳ್ಳಬೇಕಾಗಿದೆ. -ಕೇಶವಪ್ರಸಾದ್🌈

Comments