ರಾಮ ಸುಬ್ರಾಯ ಶೇಟ್ ಆ ಮಹಾರಾಜ ಸಂಗೀತಪ್ರೇಮಿ ಮತ್ತು ಸಂಗೀತ ಪೋಷಕ. ನೈಜ ಸಂಗೀತಾಸಕ್ತರನ್ನು ಸನ್ಮಾನಿಸಿ ಸೂಕ್ತ ಸೌಲಭ್ಯ ನೀಡಲು ನಿರ್ಧರಿಸಿ ಡಂಗುರ ಸಾರಿಸಿದ. ಮರುದಿನ ಬರುತ್ತಿದ್ದಂತೆ ಆಸ್ಥಾನ ತುಂಬಿಬಿಟ್ಟಿತು. ಒಬ್ಬೊಬ್ಬರೂ ತುಂಬುರ-ನಾರದರೇ! ಗೊಂದಲಗೊಂಡ ಮಹಾರಾಜ ಮಂತ್ರಿಯೊಂದಿಗೆ ಸಮಾಲೋಚಿಸಿದ ನಂತರ, ಮರುದಿನ ಇದೇ ಸಮಯಕ್ಕೆ ಆಸ್ಥಾನಕ್ಕೆ ಬರುವಂತೆ ಎಲ್ಲ ಸಂಗೀತಾಸಕ್ತರಿಗೂ ತಿಳಿಸಿದ. ಸುಪ್ರಸಿದ್ಧ ವಿದ್ವಾಂಸರ ಸಂಗೀತ ಕಛೇರಿ ರಾಜಸಭೆಯಲ್ಲಿ ಆಯೋಜಿಸಲ್ಪಟ್ಟಿತು. ಕಛೇರಿ ಕಳೆಗಟ್ಟುತ್ತಿದ್ದಂತೆ ಮಹಾರಾಜ ಎಲ್ಲರನ್ನೂ ಕಣ್ಣಲ್ಲೇ ಅಳೆಯತೊಡಗಿದ. ಆಗ ಕಂಡಿದ್ದೇನು? ಒಬ್ಬರಿಗಿಂತ ಒಬ್ಬರು ಜೋರಾಗಿ ತಾಳಹಾಕುತ್ತಿದ್ದಾರೆ, ‘ಭೇಷ್ ಭೇಷ್’ ಎಂದು ಉದ್ಗರಿಸುತ್ತ ಮೂಗಿಗೆ ನಶ್ಯ ಏರಿಸುತ್ತಿದ್ದಾರೆ. ಇಂಥ ಹಾವಭಾವಗಳು ಅತಿರೇಕಕ್ಕೆ ಮುಟ್ಟಿದಾಗ ‘ಯಾರೂ ತಾಳ ಹಾಕಬಾರದು; ಇಂಥ ಹಾವ-ಭಾವ, ಮಾತು ಶಿಕ್ಷಾರ್ಹ ಅಪರಾಧ’ ಎಂದು ಮಹಾರಾಜ ಆದೇಶಿಸಿದ. ಎಲ್ಲರೂ ಸ್ತಬ್ಧರಾದರೂ, ಮೂವರು ಮಾತ್ರ ತಲೆಯಾಡಿಸುತ್ತಲೇ ಇದ್ದರು. ಸುಮ್ಮನಿರುವಂತೆ ಮತ್ತೊಮ್ಮೆ ರಾಜಾದೇಶ ಹೊಮ್ಮಿ ಆ ಮೂವರೂ ಜಡವಸ್ತುವಿನಂತೆ ಕೂತರು. ಸಮಯ ಕಳೆದಂತೆ ಸಂಗೀತ ಕಛೇರಿಯೂ ಮತ್ತಷ್ಟು ಕಳೆಗಟ್ಟಿತು, ಗಾಯಕರು ಮೈಮರೆತು ಹಾಡುತ್ತಿದ್ದರು. ಆದರೆ ಈ ಮುಂಚೆ ರಾಜಾದೇಶದ ಹೊರತಾಗಿಯೂ ತಲೆದೂಗಿ ತಾಳಹಾಕುತ್ತಿದ್ದ ಮೂವರಲ್ಲಿ ಈಗ ಒಬ್ಬ ಮಾತ್ರ ಕಣ್ಣುಮುಚ್ಚಿ ಗಾಯಕರೊಂದಿಗೆ ದನಿಗೂಡಿಸುತ್ತ, ಮೈ...